ಕೇ - ಸ್ಮಿತ್, ಷೀಲ
1887-1956 ಇಂಗ್ಲಿಷ್ ಕಾದಂಬರಿಗಾರ್ತಿ. ವೈದ್ಯನ ಮಗಳು. ಹುಟ್ಟಿದ್ದು ಸೇಂಟ್ ಲೆನಡ್ರ್ಸ್‍ನಲ್ಲಿ. ಸ್ವತಂತ್ರವಾಗಿ ಓದಿಕೊಂಡು ಚಿಕ್ಕಂದಿನಲ್ಲಿಯೇ ಬರವಣಿಗೆಯನ್ನು ಆರಂಭಿಸಿದಳು. ದಿ ಟ್ರ್ಯಾಂಪಿಂಗ್ ಮೆಥಾಡಿಸ್ಟ್ (1908) ಈಕೆಯ ಪ್ರಥಮ ಕಾದಂಬರಿ. ಸ್ಟಾರ್‍ಬ್ರೇಸ್(1909), ಸಸೆಕ್ಸ್ ಗೋರ್ಸ್ (1916), ಟಾಮರಿ ಟೌನ್ (1919), ಗ್ರೀನ್ ಆ್ಯಪಲ್ ಹಾರ್‍ವೆಸ್ಟ್ (1920), ದಿ ಎಂಡ್ ಆಫ್ ದಿ ಹೌಸ್ ಆಫ್ ಆಲಾರ್ಡ್(1923)-ಇವು ಅನಂತರ ಬಂದ ಪುಸ್ತಕಗಳು. ಕೊನೆಯ ಪುಸ್ತಕ ಈಕೆಗೆ ಅಪಾರ ಕೀರ್ತಿಯನ್ನು ತಂದಿತು. 1924ರಲ್ಲಿ ಟಿ.ಪೆನ್‍ರೋಸ್ ಫ್ರೈ ಎಂಬ ಪಾದ್ರಿಯನ್ನು ಈಕೆ ಮದುವೆಯಾದಳು. 1929ರಲ್ಲಿ ಇಬ್ಬರೂ ರೋಮನ್ ಕ್ಯಾಥೊಲಿಕ್ ಗುಂಪಿಗೆ ಮತಾಂತರಹೊಂದಿ ಸಸೆಕ್ಸ್‍ನಲ್ಲಿ ನೆಲೆಯಾಗಿ ನಿಂತು ಸ್ವಲ್ಪ ಜಮೀನು ಕೊಂಡರು. ಷೆಪರ್ಡ್ಸ್ ಇನ್ ಸ್ಯಾಕ್‍ಕ್ಲಾತ್ (1930), ಎಂಬರ್‍ಲೇನ್ (1940), ಟಾಂಬುರಿನ್, ಟ್ರಂಪೆಟ್ ಅಂಡ್ ಡ್ರಮ್ (1943), ದಿ ಲಾರ್ಡ್‍ನರ್ಸ್ ಅಂಡ್ ದಿ ಲಾರೆಲ್‍ವುಡ್ಸ್ (1948), ಟ್ರೆಷರ್ಸ್ ಆಫ್ ದಿ ಸ್ನೋ (1949), ಮಿಸೆಸ್ ಗೆಯ್‍ಲಿ (1951), ದಿ ವ್ಯೂ ಫ್ರಂ ದಿ ಪಾರ್ಸನೇಜ್ (1954)- ಇವು ಈಕೆಯ ಇತರ ಕಾದಂಬರಿಗಳು. ಜೊನ್ನ ಗೊಡ್ಡನ್ ಮ್ಯಾರೀಡ್ (1926) ಎಂಬುದು ಕಥಾ ಸಂಕಲನ. ವಿಲ್ಲೋಸ್ ಫೋರ್ಜ್ (1914), ಸೇಂಟ್ಸ್ ಇನ್ ಸಸೆಕ್ಸ್ (1923), ಸಾಂಗ್ಸ್ ಲೇಟ್ ಅಂಡ್ ಆರ್ರ್ಲಿ (1931)-ಇವು ಮೂರು ಕವನ ಸಂಕಲನಗಳು. ತ್ರೀ ವೇಸ್ ಹೋಂ(1937) ಎಂಬುದು ಆತ್ಮ ಚರಿತ್ರೆ. ದಿ ವೀಲ್ಡ್ ಆಫ್ ಕೆಂಟ್ ಅಂಡ್ ಸಸೆಕ್ಸ್ (1953) ತನ್ನ ದೇಶವನ್ನು ಪರಿಚಯಮಾಡಿಕೊಡುವ ವಿವರಣಾತ್ಮಕ ಪುಸ್ತಕ. 1943-49ರ ಅವಧಿಯಲ್ಲಿ ಈಕೆ ಜೆ.ಬಿ. ಸ್ಟರ್ನನ ಸಹಕಾರದೊಂದಿಗೆ ಜೇನ್ ಆಸ್ಟಿನ್ನಳನ್ನು ಕುರಿತ ಎರಡು ಪುಸ್ತಕಗಳನ್ನು ಬರೆದಳು. 	
			(ಎಚ್.ವಿ.ಎಸ್.)

ಇವಳ ಕಾದಂಬರಿಗಳು ಹಳ್ಳಿಯ ಬದುಕನ್ನು ಕುರಿತವು. ಅವುಗಳ ಕ್ರಿಯೆಗೆ ಹಳ್ಳಿಯ ಜೀವನದ ಆವರಣವೇ ಬೇಕೆಂದಿಲ್ಲ. ಊರಿನಲ್ಲಾದರೂ ನಡೆಯಬಹುದು; ಆದರೆ ಹಳ್ಳಿಯ ಜೀವನದ ಸರಳತೆಯನ್ನು ಇವಳು ಅಳವಡಿಸಿಕೊಂಡಳು.		*
ಪರಿಷ್ಕರಣೆ:
ಎಲ್. ಎಸ್. ಶೇಷಗಿರಿರಾವ್